ಚರಣಸಿಂಹ ಚೌಧುರಿ
	(1902-1987). ಭಾರತದ ಮಾಜಿಪ್ರಧಾನಿ. ಪ್ರತಿಭಾವಂತ ಸಂಸದೀಯ ಪಟು, ವಿಚಾರವಂತ ರಾಜಕಾರಣಿ, ರೈತನಾಯಕ ಸರದಾರ್ ಪಟೇಲರ ನಂತರ ಭಾರತದ ಗೃಹಮಂತ್ರಿ ಹುದ್ದೆಗೆ ಮಹಿಮೆ ತಂದುಕೊಟ್ಟವರು ಚೌಧುರಿ ಚರಣಸಿಂಹರು. 1977ರಲ್ಲಿ ಮೊರಾರ್ಜಿ ನೇತೃತ್ವದ ಕೇಂದ್ರಸರ್ಕಾರದಲ್ಲಿ ಗೃಹಸಚಿವ, ಆಮೇಲೆ ಉಪಪ್ರಧಾನಿ. ಜನತಾಪಕ್ಷ ವಿಭಜನೆ ಹಂತ ಮುಟ್ಟಿದಾಗ ಮೊರಾರ್ಜಿ ನಂತರ ಅಂದಿನ ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ, ಚರಣಸಿಂಹರನ್ನು ಪ್ರಧಾನಮಂತ್ರಿಯಾಗಿ ನೇಮಕಮಾಡಿದರು. ಲೋಕಸಭೆಯಲ್ಲಿ ವಿಶ್ವಾಸಮತ ಸಿದ್ಧಪಡಿಸುವಂತೆ ಸೂಚಿಸಿದರು. ಆದರೆ ಸಂಸತ್ತನ್ನು ಎದುರಿಸದೆಯೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ಲೋಕಸಭೆಗೆ ಹೊಸದಾಗಿ ಚುನಾವಣೆ ಘೋಷಿಸಿದರು. ಹೀನಾಯ ಸೋಲುಂಡರು. ಇಂದಿರಾಗಾಂಧಿಯವರು ಪುನಃ ಗದ್ದುಗೆಗೆ ವಾಪಸಾದರು. ಭಾರತೀಯ ಲೋಕತಂತ್ರದಲ್ಲಿ ಅನಿಶ್ಚಿತ ಸ್ಥಿತಿಯ ಅಧ್ಯಾಯ ಆರಂಭವಾದದ್ದು ಹೀಗೆ. ಆದರೆ ಹಳ್ಳಿಗಳ ನಾಡಿಮಿಡಿತ ಬಲ್ಲವರಾಗಿದ್ದ ಚರಣಸಿಂಹರಿಗೆ ಹಳ್ಳಿಗಳ ಬದುಕನ್ನು ಉತ್ತಮಪಡಿಸುವ ತಹತಹ ಸದಾಕಾಲ ಇತ್ತು. ಪರಿಶುದ್ಧ ಸಾರ್ವಜನಿಕ ಜೀವನ. ನಡೆದ ಹಾದಿ ನೇರ. ಆಡಿದ ನುಡಿ ನೇರ. ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಇಂದಿಗೂ ಅವರ ಪ್ರಭಾವದ ಛಾಪಿದೆ.

	ಉತ್ತರಪ್ರದೇಶದ ಮೀರತ್ ಜಿಲ್ಲೆಯ ನೂರ್‍ಪುರದಲ್ಲಿ 1902ರಲ್ಲಿ ಜನನ. ಮಧ್ಯಮ ವರ್ಗದ ರೈತಕುಟುಂಬ. 1923ರಲ್ಲಿ ವಿಜ್ಞಾನ ಪದವೀಧರ. 1925ರಲ್ಲಿ ಆಗ್ರಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಜತೆಗೆ ವಕೀಲೀ ವಿದ್ಯಾಭ್ಯಾಸ. ಗಾಸಿóಯಾಬಾದ್‍ನಲ್ಲಿ ವಕೀಲಿ ವೃತ್ತಿ ಆರಂಭ. 1929ರಲ್ಲಿ ಮೀರತ್‍ಗೆ ಸ್ಥಳಾಂತರ. ಅಮೇಲೆ ಕಾಂಗ್ರೆಸ್ ಸೇರಿದರು.

	ಮೊಟ್ಟಮೊದಲ ಬಾರಿಗೆ 1937ರಲ್ಲಿ ಛತ್ರೌಲಿ ಕ್ಷೇತ್ರದಿಂದ ಉತ್ತರಪ್ರದೇಶ ವಿಧಾನಸಭೆಗೆ ಆಯ್ಕೆ ಆದರು. ಅಮೇಲೆ 1946, 1952, 1962 ಹಾಗೂ 1967ರಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1946ರಲ್ಲಿ ಪಂಡಿತ್ ಗೋವಿಂದವಲ್ಲಭ ಪಂತ್ ಸರ್ಕಾರದಲ್ಲಿ ಸಂಸದೀಯ ಕಾರ್ಯದರ್ಶಿಯಾದರು. ಕಂದಾಯ, ವೈದ್ಯಕೀಯ ಹಾಗೂ ಸಾರ್ವಜನಿಕ ಆರೋಗ್ಯ, ಕಾನೂನು, ವಾರ್ತಾ ಮತ್ತಿತರ ಖಾತೆಗಳನ್ನು ನಿರ್ವಹಿಸಿದರು. 1951ರಲ್ಲಿ ಸಂಪುಟ ಸಚಿವರಾಗಿ ವಾರ್ತಾ ಹಾಗೂ ನ್ಯಾಯಾಂಗ ಖಾತೆ ನಿರ್ವಹಿಸಿದರು. 1952ರಲ್ಲಿ ಡಾ. ಸಂಪೂರ್ಣಾನಂದ್ ಸಂಪುಟದಲ್ಲಿ ಕಂದಾಯ ಹಾಗೂ ಕೃಷಿ ಸಚಿವರಾಗಿ ನೇಮಕ. 1959ರ ಏಪ್ರಿಲ್‍ನಲ್ಲಿ ಅವರು ರಾಜೀನಾಮೆ ನೀಡಿದಾಗ ಕಂದಾಯ ಹಾಗೂ ಸಾರಿಗೆ ಖಾತೆಗಳನ್ನು ನಿರ್ವಹಿಸುತ್ತಿದ್ದರು. 1960ರಲ್ಲಿ ಚಂದ್ರಭಾನುಗುಪ್ತ ಮಂತ್ರಿಮಂಡಲದಲ್ಲಿ ಗೃಹ ಹಾಗೂ ಕೃಷಿ ಸಚಿವರಾಗಿದ್ದರು. 1962-63ರಲ್ಲಿ ಶ್ರೀಮತಿ ಸುಚೇತಾ ಕೃಪಲಾನಿ ಮಂತ್ರಿಮಂಡಲದಲ್ಲಿ ಕೃಷಿ ಹಾಗೂ ಅರಣ್ಯಖಾತೆ ಸಚಿವ. 1965ರಲ್ಲಿ ಕೃಷಿಖಾತೆಯನ್ನು ಬಿಟ್ಟುಕೊಟ್ಟರು. 1966ರಲ್ಲಿ ಸ್ಥಳೀಯ ಸಂಸ್ಥೆ ಖಾತೆಯ ಸಚಿವರಾದರು. 1969ರಲ್ಲಿ ಕಾಂಗ್ರೆಸ್ ವಿಭಜನೆಯಾದ ನಂತರ 1970ರ ಫೆಬ್ರವರಿಯಲ್ಲಿ ಎರಡನೆಯ ಬಾರಿಗೆ ಉತ್ತರಪ್ರದೇಶದ ಮುಖ್ಯಮಂತ್ರಿಯಾದರು. ಆಗ ಕಾಂಗ್ರೆಸ್ ಬೆಂಬಲ ನೀಡಿತು. ಆದರೆ 1970ರ ಅಕ್ಟೋಬರ್ 2ರಂದು ಉತ್ತರಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂತು. ಕಾಂಗ್ರೆಸ್‍ನಿಂದ ಹೊರಬಂದು ಲೋಕದಳ ಕಟ್ಟಿದರು. ಉತ್ತರಪ್ರದೇಶದಲ್ಲಿ ಸಚಿವರಾಗಿದ್ದಾಗ ಆಡಳಿತದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅದಕ್ಷತೆಯ ಕಡುವಿರೋಧಿ, ವಾಸ್ತವವಾದಿ.

	ಉತ್ತರಪ್ರದೇಶದಲ್ಲಿ ಭೂಸುಧಾರಣೆಗಳ ಶಿಲ್ಪಿ. ಇವರ ಪ್ರತಿಪಾದನೆಯಿಂದಾಗಿಯೇ ಸಚಿವರ ಸಂಬಳ-ಸವಲತ್ತುಗಳು ಕಡಿತಗೊಂಡವು. ತಳಮಟ್ಟದಲ್ಲಿ ಜನಪದದ ಗಟ್ಟಿ ಬೆಂಬಲ. ಅಂತಹ ಜನನಾಯಕ ಅಪರೂಪ. ಸಾಮಾಜಿಕ ನ್ಯಾಯದಲ್ಲಿ ಅಚಲ ವಿಶ್ವಾಸ. ಲಕ್ಷಾಂತರ ರೈತರ ಆಶೋತ್ತರಗಳಿಗೆ ಸ್ಪಂದನ ಅವರನ್ನು ರೈತನಾಯಕನನ್ನಾಗಿ ಮೂಡಿಸಿತು.

	1975ರಲ್ಲಿ ತುರ್ತುಪರಿಸ್ಥಿತಿ ಹೇರಿದಾಗ, ಸೆರೆವಾಸ. 1977ರಲ್ಲಿ ಲೋಕನಾಯಕ ಜೆ. ಪಿ. ಕಟ್ಟಿದ ಜನತಾಪಕ್ಷದ ಪ್ರಮುಖ ಆಧಾರಸ್ತಂಭ. ಜನತಾ ಸರಕಾರದಲ್ಲಿ ಗೃಹಸಚಿವ ಹುದ್ದೆ. ತುರ್ತುಪರಿಸ್ಥಿತಿಯ ಅತಿರೇಕಗಳ ತನಿಖೆಗೆ ಷಾ ಆಯೋಗ ನೇಮಕ ಇವರ ಪ್ರಮುಖ ಕ್ರಮ. ಆರೋಪಗಳನ್ನು ಹೊತ್ತ ಇಂದಿರಾಗಾಂಧಿಯವರನ್ನು ಜೈಲಿಗೆ ಕಳುಹಿಸಲು ಹಿಂದೇಟು ಹಾಕಲಿಲ್ಲ. ಜನತಾ ಸರಕಾರದಲ್ಲಿ ನಿರಂತರ ಭಿನ್ನಾಭಿಪ್ರಾಯ ತಿಕ್ಕಾಟದಿಂದಾಗಿ ಮೊರಾರ್ಜಿ ಬಹುಮತ ಕಳೆದುಕೊಂಡಾಗ, ಅಂದಿನ ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ ಚರಣಸಿಂಹರನ್ನು ಪ್ರಧಾನಿಯಾಗಿ ನೇಮಿಸಿದರು. ಪ್ರಮಾಣವಚನ ಬೋಧಿಸಿದರು. ಆದರೆ ವಿಶ್ವಾಸಮತ ಸಾಬೀತುಪಡಿಸುವ ಬದಲು ಸಾರ್ವತ್ರಿಕ ಚುನಾವಣೆ ಸಾರಿದರು; ಸೋತರು. ಕಾಂಗ್ರೆಸ್ ಬೆಂಬಲ ನಂಬಿ ಅತಂತ್ರರಾದರು. ರಾಜಕೀಯ ಅಸ್ಥಿರತೆಗೆ ಕಾರಣರಾದರೆಂಬ ಆರೋಪ ಹೊರುವುದಾಯಿತು.

	ಸಾದಾ ಬದುಕಿನ ಚರಣಸಿಂಹರು, ವಿರಾಮವೇಳೆಯನ್ನು ಬರವಣಿಗೆಯಲ್ಲಿ ತೊಡಗಿಸಿದ್ದರು. ಹಲವಾರು ಪುಸ್ತಕ-ಪುಸ್ತಿಕೆಗಳನ್ನು ಬರೆದರು. `ಜಮೀನ್ದಾರಿ ರದ್ದು, `ಸಹಕಾರಿ ಬೇಸಾಯ-ಕ್ಷಕಿರಣ', `ಭಾರತದ ಬಡತನ ಮತ್ತು ಅದಕ್ಕೆ ಪರಿಹಾರ, ರೈತ ಒಡೆತನ ಅಥವಾ ಶ್ರಮಿಕರಿಗೆ ಭೂಮಿ ಹಾಗೂ ಒಂದು ಕನಿಷ್ಠ ಹಂತದ ಕೆಳಗೆ ಜಮೀನು ಹಿಡುವಳಿ ತಗ್ಗಿಸುವುದನ್ನು ತಡೆಯುವುದು - ಇವರ ಕೆಲವು ಪ್ರಮುಖ ಬರಹಗಳು.

	ಚೌಧುರಿ ಚರಣಸಿಂಹರು ತಮ್ಮ 85ನೇ ವಯಸ್ಸಿನಲ್ಲಿ 1987ರಂದು ಮೇ 5ರಂದು ನಿಧನ ಹೊಂದಿದರು.												(ಕೆ.ಎಸ್.ಅಚ್ಯುತನ್)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ